ಈಗಿನ ಕಾಲದಲ್ಲಿ ಶ್ರೀಮಂತರಿಂದ ಮಧ್ಯಮವರ್ಗದ ಜನರವರೆಗೆ ಪ್ರತಿಯೊಬ್ಬರು ತಮ್ಮ ಮನೆಯ ಸೌಂದರ್ಯ ಇನ್ನೊಬ್ಬರ ಕಣ್ಣು ಕುಕ್ಕುವಂತೆ ಇರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತಮಗೆ ಇಷ್ಟವಾದ ಆಯ್ಕೆಗಳನ್ನು ಕೆಲವರು ತಾವೇ ಮಾಡಿಕೊಂಡರೆ ಇನ್ನು ಕೆಲವರು ಒಳಾಂಗಣ ವಿನ್ಯಾಸಗಾರರ ಸಲಹೆ ಪಡೆಯಲು ಮುಂದಾಗುತ್ತಾರೆ.
ಒಳಾಂಗಣ ವಿನ್ಯಾಸಗಾರರು ಸೂಚಿಸುವ ಒಂದೊಂದು ವಿನ್ಯಾಸ ಶೈಲಿಗಳು ಎಂತಹವರನ್ನೂ ನಿಶ್ಶಬ್ದವಾಗಿಸಿಬಿಡುತ್ತವೆ. ಅವರ ಯೋಚನಾ ಶಕ್ತಿ, ತೋರಿಸಿದ ಯಾವುದೇ ಜಾಗದಲ್ಲಿ ಅವರ ಗ್ರಹಿಕೆಯ ಶಕ್ತಿ ನಿಜಕ್ಕೂ ಅದ್ಭುತ ಮತ್ತು ಅವಿಸ್ಮರಣೀಯ.
ಆದರೂ ಸಹ ವಿನ್ಯಾಸಗಾರರು ಮನೆಯನ್ನು ನೋಡಿ ಕೇವಲ ಸಲಹೆಗಳನ್ನು ಕೊಟ್ಟು ಆಯ್ಕೆಯನ್ನು ಮನೆಯ ಮಾಲೀಕರಿಗೆ ಬಿಡುತ್ತಾರೆ. ಹಾಗೆ ನೋಡಿದರೆ ಕೆಲವೊಂದು ಸಂದರ್ಭಗಳಲ್ಲಿ ಆಯ್ಕೆಯನ್ನು ವಿನ್ಯಾಸಗಾರರೇ ತೆಗೆದುಕೊಂಡರೆ ಒಳ್ಳೆಯದು.
ಏಕೆಂದರೆ ಇಂತಹ ಹಲವಾರು ಮನೆಗಳ ವಿನ್ಯಾಸ ಸಿದ್ದಪಡಿಸಿ ಭೇಷ್ ಎನಿಸಿಕೊಂಡ ಪ್ರತಿಭೆ ಅನುಭವ ಎರಡೂ ಅವರಿಗಿರುತ್ತದೆ.
ವಾಸ್ತುಗಳ ಅನುಗುಣವಾಗಿ ಮನೆಯ ಮಂದಿ ಬಣ್ಣಗಳನ್ನು ಆಯ್ಕೆ ಮಾಡುವುದು ಒಂದು ಕಡೆ. ವಿನ್ಯಾಸಗಾರರ ಆಯ್ಕೆ ಒಂದು ಕಡೆ. ವಿನ್ಯಾಸಗಾರರ ಪ್ರಕಾರ ಮನೆಯ ಮೂಲೆ ಮೂಲೆಗಳಲ್ಲಿ ಬಳಸಿದ ಒಂದೊಂದು ಬಣ್ಣವೂ ಮನೆಯ ಸದಸ್ಯರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಶಕ್ತಿ ಪಡೆದಿರುತ್ತವೆ.
ಮನಸ್ಸಿಗೂ ಬಣ್ಣಕ್ಕೂ ಏನು ಸಂಬಂಧ ಎಂಬುದನ್ನು ಬಣ್ಣ ಮನೋವಿಜ್ಞಾನ ತಜ್ಞರು ಬಹಳ ಚೆನ್ನಾಗಿ ವಿವರಿಸುತ್ತಾರೆ.