ಕೋವಿಡ್ 19 ಕಾಯಿಲೆ ಭಾರತದಲ್ಲಿ ತಾಂಡವಾಡುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ಸೂಕ್ತ ಔಷಧಿ ಸಿಕ್ಕಿಲ್ಲ, ಇದಕ್ಕಾಗಿ ವಿಜ್ಞಾನಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕೊರೊನಾವೈರಸ್‌ನಿಂದ ಬರುವ ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ನಮ್ಮ ಮುಂದೆ ಇರುವ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಕೊರೊನಾವೈರಸ್ ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ, ಆದರೆ ವೈಜ್ಞಾನಿಕವಾಗಿ ಯಾವುದೇ ಔಷಧಿಗೆ ಅಧಿಕೃತ ಅನುಮತಿ ಸಿಕ್ಕಿಲ್ಲ. ಮತ್ತೊಂದೆಡೆ ನ್ಯೂಯಾರ್ಕ್‌ನ ಡಾ. ಆ್ಯಂಡ್ರಿವ್ ಜಿ ವೇಬರ್ ಪ್ರಕಾರ ವಿಟಮಿನ್ ಸಿ ಡೋಸ್ ಸಿಕ್ಕ ರೋಗಿಗಳು ಬೇಗನೆ ಚೇತರಿಸಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಸೋಂಕು, ರಕ್ತದೊತ್ತಡ ಮುಂತಾದ ಸಮಸ್ಯೆಯಿಂದ ಐಸಿಯುವಿನಲ್ಲಿರುವ ರೋಗಿಗೆ ವಿಟಮಿನ್ ಸಿ ಕೊಡುವುದರಿಂದ ಅವರ ದೇಹದಲ್ಲಿ ಬೇಗನೆ ಚೇತರಿಕೆ ಕಂಡು ಬರುತ್ತಿರುವುದಾಗಿ ಹೇಳಿದ್ದಾರೆ.