'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಹಾಗೂ ದಿವಾಕರ್ ಹೇಗೋ, ಹಾಗೇ ರಿಯಾಝ್ ಹಾಗೂ ಸಮೀರಾಚಾರ್ಯ ಕೂಡ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ರಿಯಾಝ್ ಇಷ್ಟ ಪಡುವ ಇಬ್ಬರು ಸ್ಪರ್ಧಿಗಳ ಪೈಕಿ ಸಮೀರಾಚಾರ್ಯ ಕೂಡ ಒಬ್ಬರು. ಇಂತಿಪ್ಪ ಸಮೀರಾಚಾರ್ಯ ಕೂತಿದ್ದ ಚೇರ್ ನ ಕಳೆದ ವಾರ ರಿಯಾಝ್ ಒದ್ದರು. ಸಾಲದಕ್ಕೆ, ''ಸಮೀರಾಚಾರ್ಯ ಅವರನ್ನ ಕೆಳಗೆ ಬೀಳಿಸಲು ಚೇರ್ ಗೆ ಪುಶ್ ಕೊಟ್ಟೆ'' ಎಂದು ಸಮರ್ಥಿಸಿಕೊಂಡರು. ರಿಯಾಝ್ ಅವರ ಈ ನಡವಳಿಕೆ ಸುದೀಪ್ ಗೆ ಇಷ್ಟ ಆಗ್ಲಿಲ್ಲ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ರಿಯಾಝ್ ಗೆ ಸುದೀಪ್ ಬೆಂಡೆತ್ತಿದರು. ತಮ್ಮ ತಪ್ಪಿನ ಅರಿವಾದ ಮೇಲೆ ಸಮೀರಾಚಾರ್ಯ ಅವರ ಬಳಿ ಬೇಷರತ್ ಕ್ಷಮೆ ಕೇಳಿದರು ರಿಯಾಝ್. ಗಾರ್ಡನ್ ಏರಿಯಾದಲ್ಲಿ ಹಾಕಲಾಗಿರುವ ಕುರ್ಚಿಗಳ ಮೇಲೆ ಅನುಪಮಾ ಹಾಗೂ ಸಮೀರಾಚಾರ್ಯ ಕುಳಿತುಕೊಳ್ಳಬೇಕಿತ್ತು. ಇಬ್ಬರನ್ನು ಎದುರಾಳಿ ತಂಡದವರು 'ಬಿಗ್ ಬಾಸ್'ಗೆ ತಿಳಿಸಿದ ಸಮಯದೊಳಗೆ ಎಬ್ಬಿಸಬೇಕಿತ್ತು. ಚಟುವಟಿಕೆಯ ಅನುಸಾರ, ಸಮೀರಾಚಾರ್ಯ ಅವರನ್ನ ಎಬ್ಬಿಸಲು ರಿಯಾಝ್, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮೂರು ಗಂಟೆ ಸಮಯ ನಿಗದಿ ಪಡಿಸಿದ್ದರು.