ಉಡುಪಿ ಜಿಲ್ಲೆ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿದ್ಯಾರ್ಥಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. 2004ರಲ್ಲಿ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸುನಿಲ್ ಕುಮಾರ್, ತಮ್ಮ ಸಮೀಪದ ಪ್ರತಿಸ್ಪರ್ಧಿಯ ವಿರುದ್ದ ಜಯಗಳಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೋಪಾಲ ಭಂಡಾರಿಯವರ ವಿರುದ್ದ ಕೇವಲ 1537 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಕಳೆದ, ಅಂದರೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಸುನಿಲ್ ಕುಮಾರ್ ಜಯಭೇರಿ ಬಾರಿಸಿದ್ದರು ಮತ್ತು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದ ಕ್ಷೇತ್ರ ಇದೊಂದೇ ಆಗಿತ್ತು. ಬಿಜೆಪಿ ಶಾಸಕರಾಗಿ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ (Chief Whip) ಕೆಲಸ ಮಾಡುತ್ತಿರುವ ಸುನಿಲ್ ಕುಮಾರ್, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಮುಂಬರುವ ಚುನಾವಣೆ, ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮುಂತಾದ ಪಕ್ಷದ ನಾಯಕರ ಹೇಳಿಕೆಯ ಬಗ್ಗೆ ಸುನಿಲ್ ಕುಮಾರ್ ಸಂದರ್ಶನದಲ್ಲಿ ವಿವರಿಸಿದ್ದಾರೆ