ಸಿಎಂ ಕುರ್ಚಿ ಗುದ್ದಾಟ ಬದಿಗಿಟ್ಟು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ: ಬಿ.ವೈ. ವಿಜಯೇಂದ್ರ

ETVBHARAT 2025-11-04

Views 74

ಚಿಕ್ಕೋಡಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಗುದ್ದಾಟದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಈ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದೆ. ಕಬ್ಬು ಬೆಳೆಗಾರರ ತಾಳ್ಮೆ ಪರೀಕ್ಷೆ ಮಾಡಬೇಡಿ, ತಕ್ಷಣ ಯಾರಾನ್ನಾದರೂ ಕಳುಹಿಸಿ, ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈಟಿವಿ ಭಾರತ ಪ್ರತಿನಿಧಿ ಶಿವರಾಜ್ ಎಂ. ನೇಸರಗಿ ಜೊತೆಗೆ ಮಾತಿಗೆ ಸಿಕ್ಕರು.

ಈ ವೇಳೆ "ಕಳೆದ ಆರು ದಿನಗಳಿಂದ ಕಬ್ಬು ಬೆಳೆಗಾರು ಶಾಂತಿಯುತವಾಗಿ ಚಳವಳಿ ಮಾಡಿಕೊಂಡು ಬಂದಿದ್ದಾರೆ. ನ್ಯಾಯಸಮ್ಮತವಾಗಿ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರ ಗಮನ ಹರಿಸಿ, ಚರ್ಚೆ ಮಾಡಿ ಸಮಸ್ಯೆಗೆ ಸ್ಪಂದನೆ ಮಾಡಬೇಕಾಗಿತ್ತು. ಆದರೆ, ಅದು ಇನ್ನೂ ಕೂಡ ಆಗಿಲ್ಲ. ಕಬ್ಬು ಬೆಳೆಗಾರ ಲಕಪ್ಪ ವಿಷ ಸೇವಿಸಿ ಅತ್ಮಹತ್ಯೆಗೆ ಪ್ರಯತ್ನಪಟ್ಟು, ರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ. ಅವರ ಆರೋಗ್ಯ ವಿಚಾರಣೆ ಮಾಡಲು ಕೂಡ, ಯಾರೂ ಬಂದಿಲ್ಲ. ಜವಾಬ್ದಾರಿ ಇರುತ್ತಿದ್ದರೆ, ಸರ್ಕಾರ ಈ ಹೋರಾಟ ಬೆಳೆಯುವುದಕ್ಕೆ ಬಿಡಬಾರದಾಗಿತ್ತು. ಸಮಸ್ಯೆ ಮತ್ತಷ್ಟು ಹೆಚ್ಚಿದೆ. ರೈತರ ತಾಳ್ಮೆಯ ಕಟ್ಟೆ ಒಡೆದಿದೆ. ನಿಮ್ಮ ಮುಖ್ಯಮಂತ್ರಿ ಕುರ್ಚಿ ಗುದ್ದಾಟ ಏನೇ ಇರಲಿ ರೈತರ ವಿಚಾರದಲ್ಲಿ ಅವರ ತಾಳ್ಮೆ ಪರಿಕ್ಷೆ ಮಾಡಬೇಡಿ. ತಕ್ಷಣವೇ ಯಾರನ್ನಾದರೂ ಕಳುಹಿಸಿ ರೈತರ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.

"ಆರು ದಿನಗಳಿಂದ ಹೋರಾಟ ಮಾಡಿಕೊಂಡು ಬಂದರೂ ಸಂಬಂಧಪಟ್ಟ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆ ಆಲಿಸಲು ಬಂದಿಲ್ಲ ಎಂದರೆ, ಇವರಿಗೆ ಅಧಿಕಾರ ದರ್ಪ, ಮದ ತಲೆಗೆ ಏರಿದೆ" ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದರು.

ನಾಳೆ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳದೆ, ನಾನು ಇಲ್ಲೇ ರೈತರ ಜೊತೆಗೆ ಇದ್ದುಕೊಂಡು ರೈತರ ಸಮಸ್ಯೆಗೆ ದ್ವನಿಯಾಗುತ್ತೇನೆ ಎಂದು ಹೇಳಿದರು.

ಇದನ್ನೂ ನೋಡಿ: ಆರನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ: ರಾಜ್ಯ ಹೆದ್ದಾರಿ ಬಂದ್​ ಮಾಡಿ ಪ್ರತಿಭಟನೆ

Share This Video


Download

  
Report form
RELATED VIDEOS