ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪನ ಮುಂದುವರೆದಿದೆ. ಜನರಲ್ಲಿ ಕಂಪನದ ಆತಂಕ ದೂರಾಗುವ ಮುನ್ನವೇ ಪದೇಪದೇ ಭೂಮಿ ಕಂಪಿಸುತ್ತಿದೆ. ನಿನ್ನೆ ರಾತ್ರಿ ಸುಮಾರು 9.20ಕ್ಕೆ ಭೂಮಿ ಕಂಪಿಸಿದೆ. ಇದು ಕಳೆದೊಂದು ವಾರದಿಂದ ಈವರೆಗೆ 9ನೇ ಬಾರಿಯ ಕಂಪನವಾಗಿದೆ. ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಭಾಗದಲ್ಲಿ ಭಾರೀ ಶಬ್ದದೊಂದಿಗೆ ಸಣ್ಣ ಪ್ರಮಾಣದ ಭೂಮಿ ಕಂಪನದ ಅನುಭವವಾಗಿದೆ. ಇನ್ನು ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮದ ರಸ್ತೆಯ ಮೇಲೆ ಗುಡ್ಡ ಕುಸಿದಿದೆ. ಇದ್ರಿಂದ ಮೊಣ್ಣಂಗೇರಿ ಗ್ರಾಮದ ಕೊಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಣ್ಣ ಪ್ರಮಾಣದ ಮಳೆಯ ನಡುವೆಯೇ ಇಷ್ಟೊಂದು ಅವಾಂತರಗಳಾದರೆ, ಅಬ್ಬರ ಮಳೆ ಬಂದರೆ ಹೇಗೆಂದು ಕೊಡಗು ಜನತೆ ಕಂಗಾಲಾಗಿದ್ದಾರೆ. ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಮಳೆ ಹಿನ್ನೆಲೆ ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆ ಸಂಚಾರ ಬಂದ್ ಆಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ 2 ಅಡಿಗೂ ಅಧಿಕ ನೀರು ನಿಂತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರಿನಲ್ಲೇ ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಯಿಂದ ಕೋರಂಗಾಲದ ವಾಜಪೇಯಿ ವಸತಿ ಶಾಲೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಾಲೆಗೆ 8 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಪ್ರವಾಹದ ನೀರಿನಲ್ಲೇತಂತಮ್ಮ ಊರುಗಳತ್ತ ಹೊರಟಿದ್ದಾರೆ.
#publictv #newscafe #hrranganath