ವಿವಿಧ ಬೇಡಿಕೆ ಈಡೇರಿಸುವಂತೆ ಎನ್.ಎಸ್.ಯು.ಐ ನಿಂದ ಪ್ರತಿಭಟನೆ
ಬೆಂಗಳೂರು: ವಿದ್ಯಾರ್ಥಿ ವೇತನ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಟ್ಯಾಬ್ ನೀಡಬೇಕು, ವಸತಿ ನಿಲಯಗಳಿಗೆ ಭದ್ರತೆ ನೀಡುವಂತೆ ಅಗ್ರಹಿಸಿ ಎನ್.ಎಸ್.ಯು.ಐ.ವಿದ್ಯಾರ್ಥಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು.
ಬೃಹತ್ ವಿದ್ಯಾರ್ಥಿ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಲವು ವಿಷಯಗಳನ್ನು ವಿರೋಧ ವ್ಯಕ್ತಪಡಿಸುವ ಸಲುವಾಗಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಹೋದರೆ ರಾಜ್ಯಾದ್ಯಂತ ಇರುವ ಲಕ್ಷಾಂತರ ಎನ್.ಎನ್.ಯು.ಐ. ವಿದ್ಯಾರ್ಥಿಗಳು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿವೇತನದ ಸೌಲಭ್ಯ ಪಡೆಯಲು ಅರ್ಹರಾದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಇವರುಗಳಿಗೆ ಇನ್ನೂ ವಿದ್ಯಾರ್ಥಿವೇತನ ಪಾವತಿಯಾಗಿಲ್ಲ.
ವಿದ್ಯಾರ್ಥಿಗಳಿಗೆ ನೀಡುವ ಉಚಿತ ಬಸ್ ಪಾಸ್ ಸೌಲಭ್ಯವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಹಾಗೂ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಬಗ್ಗೆ ಮತ್ತು ಉಚಿತವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಟ್ಯಾಬ್ ನೀಡಬೇಕು ಹಾಗೂ ವಸತಿನಿಲಯ (ಹಾಸ್ಟೆಲ್ )ಗಳಲ್ಲಿ ಆರೋಗ್ಯ ಮತ್ತು ಭದ್ರತೆಯನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಷನಲ್ ಸ್ಪೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್.ಎಸ್.ಯು.ಐ) ವತಿಯಿಂದ ಮತ್ತು ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು ಮಹಾರಾಣಿ ಕಾಲೇಜು, ಬೆಂಗಳೂರು ಗೃಹವಿಜ್ಞಾನ ಕಾಲೇಜು, ಬೆಂಗಳೂರು ಆರ್.ಸಿ. ಕಾಲೇಜುಗಳ ವಿದ್ಯಾರ್ಥಿಗಳು ಜೊತೆಗೂಡಿ ಪ್ರತಿಭಟನೆ ನಡೆಸಲಾಯಿತು.
ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮತ್ತು ಉಪಾಧ್ಯಕ್ಷ ಜಯೇಂದರ್ ಸಾಯಿ, ಪ್ರಧಾನ ಕಾರ್ಯದರ್ಶಿಗಳಾದ ಮನೀಶ್ ಜಿ.ರಾಜ್, ಅನಿರುದ್ದ್ ಕಟೀಲ್, ದೀಪಕ್ ಗೌಡ, ಸಂಜಯರಾಜ್ ಆಫ್ರಿದಿ ಮತ್ತು ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.