Charmadi Ghat, A Beautiful Drive Through Western Ghats | ಚಾರ್ಮಾಡಿ ಘಾಟಿನಲ್ಲಿ ನಿಸರ್ಗ ಮಾತೆಯ ನೈಜ ಸೊಬಗು
ಮಲೆನಾಡಲ್ಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿನಲ್ಲಿ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ.
ಕಾಫಿನಾಡು ಚಿಕ್ಕಮಗಳೂರು ಅಂದರೆ ಸಾಕು. ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬಂದು ನಿಲ್ಲುತ್ತೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕುವ ಮಂಜಿನ ರಾಶಿ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ.
ಮಳೆಗಾಲ ಬಂತೆಂದರೆ ಸಾಕು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನು ಪಡೆದುಕೊಳ್ಳುತ್ತದೆ. ಬಂಡೆಗಳ ಮೇಲಿನಿಂದ ಝುಳು-ಝುಳು ನಿನಾದ ಗೈಯುತ್ತಾ ಧುಮ್ಮಿಕ್ಕುವ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತದೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳ ಸಾಲು ಹಸಿರೊದ್ದು ಝೇಂಕರಿಸುತ್ತಿದ್ದರೆ, ಮಂಜಿನ ಕಣ್ಣಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ.
ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮೋ ಜಲಪಾತಗಳು ರಮಣೀಯ ನೋಟವನ್ನು ಸೃಷ್ಟಿಸಿದರೆ, ದಟ್ಟ ಕಾನನದ ನಡುವಿನ ಝುಳು-ಝಳು ನಿನಾದೊಂದಿಗೆ ಹರಿಯೋ ಝರಿಗಳು ಮನಕ್ಕೆ ಮುದ ನೀಡುತ್ತದೆ. ಮುಗಿಲು ಚುಂಬಿಸುವ ಹಸಿರು ಬೆಟ್ಟದ ಮೇಲೆಲ್ಲ ಹರಡಿರುವ ಹಿಮದ ರಾಶಿ. ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನು ಹೊರಸೂಸುವ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗುವ ಜಲಧಾರೆಯ ಮಂಜುಳಗಾನ. ಪ್ರಶಾಂತತೆಯಲ್ಲೂ ಹಸಿರ ಹೊದ್ದು ಮಲಗಿರೋ ದಟ್ಟ ಕಾನನಗಳು ಮಲೆನಾಡಲ್ಲೊಂದು ಲೋಕವನ್ನೆ ಸೃಷ್ಟಿಸಿವೆ. ಹಸಿರು ಬೆಟ್ಟಗಳ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಕವಲು. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳೊಳಗಿನ ಜಲಪಾತಗಳ ವೈಭವ. ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ತುಂಬೆಲ್ಲಾ ಜಲಪಾತಗಳ ಚಿತ್ತಾರವೇ ಅನಾವರಣಗೊಂಡಿದೆ.
For latest updates on film news subscribe our channel.
Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv