Sheethal Shetty of 'Bigg Boss' fame, starrer new Kannada movie Titled 'Pathibeku.com' goes on floors.
ಕನ್ನಡದ ಪ್ರಖ್ಯಾತ ಸುದ್ದಿ ವಾಹಿನಿ ಟಿವಿ9 ಹಾಗೂ ಬಿಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಈಗ 'ಬಿಗ್ ಬಾಸ್' ಶೀತಲ್ ಎಂದೇ ಹೆಸರುವಾಸಿ. 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ, ಸ್ಯಾಂಡಲ್ ವುಡ್ ನಲ್ಲಿ ಶೀತಲ್ ಶೆಟ್ಟಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮದ ನಿರೂಪಣೆಯಲ್ಲಿ ತೊಡಗಿರುವ ಶೀತಲ್ ಶೆಟ್ಟಿ, ಅದೇ ಗ್ಯಾಪ್ ನಲ್ಲಿ 'ಮೂಕ ನಾಯಕ', '96', 'ಚೇಸ್', 'ಮಾರ್ಗಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಇವೆಲ್ಲದರೊಂದಿಗೆ ಶೀತಲ್ ಶೆಟ್ಟಿಗೆ 'ಪತಿಬೇಕಂತೆ'.! ಹಾಗಂದ ಮಾತ್ರಕ್ಕೆ ಏನೇನೋ ಕಲ್ಪನೆ ಮಾಡಿಕೊಳ್ಳುವ ಮೊದಲು ಇದು ಅಪ್ಪಟ ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ.
ಹೊಸ ಚಿತ್ರವೊಂದರಲ್ಲಿ ನಟಿಸಲು ಶೀತಲ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ 'ಪತಿಬೇಕು.ಕಾಮ್'.!
'ಪತಿಬೇಕು.ಕಾಮ್'... ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಶೀತಲ್ ಶೆಟ್ಟಿ ಅವರದ್ದೇ ಪ್ರಮುಖ ಪಾತ್ರ. ಯುವತಿಯೊಬ್ಬಳು ಮದುವೆಗಾಗಿ ನಡೆಸುವ ಪರದಾಟವೇ ಈ ಸಿನಿಮಾದ ಕಥಾಹಂದರ.
'ಪತಿಬೇಕು.ಕಾಮ್' ಚಿತ್ರವನ್ನು ಶಾನ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ತರ್ಲೆ ನನ್ಮಕ್ಳು' ಚಿತ್ರ ನಿರ್ಮಿಸಿದ್ದ ರಾಕೇಶ್ ಹಾಗೂ ಅವರ ಗೆಳೆಯರಾದ ಶ್ರೀನಿವಾಸ್, ಮಂಜುನಾಥ್, ವೀರೇಂದ್ರ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿದ 'ಪತಿಬೇಕು.ಕಾಮ್' ಚಿತ್ರದ ಚಿತ್ರೀಕರಣ ಜುಲೈ 8 ರಿಂದ ಆರಂಭವಾಗಲಿದೆ.